ಭೂಗೋಳಶಾಸ್ತ್ರ - 
	ವಿಸ್ತಾರ ವ್ಯಾಪ್ತಿಯಿದ್ದು ವೈವಿಧ್ಯಮಯವೂ ಮಾನವ ನಿವಾಸವೂ ಆದ ಭೂಪಾತಳಿಯ ಅಧ್ಯಯನ (ಜಿಯೋಗ್ರಫಿ).  ಗ್ರೀಕ್ ಭಾಷೆಯಲ್ಲಿ ಜೀಒ ಎಂದರೆ ಭೂಮಿ, ಗ್ರಾಫೊóೀಸ್ ಎಂದರೆ ವಿವರಣೆ ಎಂದರ್ಥ.  ಭೂಮಿಯ ಮೇಲ್ಮೈಯ ವಿವರಣೆಯನ್ನು ಕುರಿತ ವಿಜ್ಞಾನವಿದು.  ಅಂತೆಯೇ ಕನ್ನಡದಲ್ಲೂ ಇದನ್ನು ಭೂವಿವರಣೆ ಎಂದು ಕರೆಯುವುದು ರೂಢಿಯಾಗಿ ಬಂದಿದ್ದರೂ ಇದು ಕೇವಲ ವಿವರಣೆಯೊಂದೇ ಅಲ್ಲ, ಈ ವಿವರಣೆಯನ್ನು ಕುರಿತ ವಿಜ್ಞಾನ ಅಥವಾ ಶಾಸ್ತ್ರವೂ ಹೌದು.  ಎಂದೇ ಇದನ್ನು ಭೂಗೋಳಶಾಸ್ತ್ರ ಎಂದು ಕರೆಯುವುದು ಹೆಚ್ಚು ಯುಕ್ತ.

	ಗ್ರೀಕ್ ಮೂಲದ ಪದವನ್ನು ಯಥಾವತ್ತಾಗಿ ಅರ್ಥವಿಸಿದರೆ ಇದು ಕೇವಲ ವಿವರಣೆಯೆನಿಸುವುದರಿಂದ ಭೂಮಿಯ ಮೇಲಣ ಸ್ಥಳ ಪ್ರದೇಶ ಮತ್ತು ಜನಾಂಗಗಳನ್ನು ಕುರಿತ ಪಟ್ಟಿಯಷ್ಟೇ ಇದರ ವಿಷಯವಾಗುವುದೆಂದು ಹಿಂದೆ ಭಾವಿಸಲಾಗಿತ್ತು.  ಆದರೆ ಈಗ ಧೋರಣೆ ಬಹಳಷ್ಟು ಬದಲಾಗುತ್ತಿದೆ.  ಇದು ಬರೀ ವಿವರಣೆಯಾಗಿಲ್ಲದೆ ಯಾವುದೇ ಒಂದು ಪರಿಸ್ಥಿತಿಯ ಅಥವಾ ವಿತರಣೆಯ ಹಿಂದಿನ ಕಾರಣ ಮತ್ತು ಬಲಗಳ ಅಧ್ಯಯನವೂ ಆಗಿವೆ. ಆದ್ದರಿಂದ ಭೂಗೋಳಶಾಸ್ತ್ರ ಒಂದು ಕಲೆಯಷ್ಟೇ (ಆಟ್ರ್ಸ್) ಅಲ್ಲದೆ ವಿಜ್ಞಾನ ಮತ್ತು ತತ್ತ್ವಶಾಸ್ತ್ರವೂ (ಮಾನವ ಸಂಬಂಧಿಯಾದ್ದರಿಂದ) ಆಗಿದೆ.

	ಹೀಗೆ ಸಮಗ್ರ ದೃಷ್ಟಿಯಿಂದ ನೋಡಿದಾಗ ಭೂಮಿಯ ಮೇಲ್ಮೈಯ ನಾನಾ ಪ್ರದೇಶಗಳ ಗುಣಲಕ್ಷಣಗಳ ಪರೀಕ್ಷೆ ಕುರಿತ ಶಾಸ್ತ್ರವಿದು ಎಂದಾಗುತ್ತದೆ.  ಒಂದು ಪ್ರದೇಶ ಇನ್ನೊಂದು ಪ್ರದೇಶದಿಂದ ಹೇಗೆ ಭಿನ್ನವಾಗಿದೆ, ವಿಶಿಷ್ಟವಾಗಿದೆ, ಇದಕ್ಕೆ ಕಾರಣಗಳೇನು, ಈ ಪ್ರದೇಶಗಳ ನಡುವಣ ಸಂಬಂಧ ಎಂಥದು ಮುಂತಾದ ಸಂಗತಿಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ.  ಭೂಮಿಯ ಪಾತಳಿ ನಾನಾ ಗುಣಲಕ್ಷಣಗಳ ಸಮ್ಮಿಲನ. ಇವುಗಳ ಪೈಕಿ ಒಂದೊಂದು ಗುಣಲಕ್ಷಣವೂ ಯಾವುದೋ ನಿರಂತರ ಪ್ರಕ್ರಿಯೆಯ ತಾತ್ಕಾಲಿಕ ಪರಿಣಾಮ. ಈ ಒಂದೊಂದು ಪ್ರಕ್ರಿಯೆಯೂ ಸಂಕೀರ್ಣವಾದ್ದು; ಇದು ಹಲವು ಬದಲಾವಣೆಗಳ ಅನುಪೂರ್ವಿ, ಪರಂಪರೆ, ಅನುಕ್ರಮ, ಕಾರ್ಯಕಾರಣಗಳ ಸರಪಳಿಯ ಕೊಂಡಿಗಳಂತೆ ಈ ಬದಲಾವಣೆಗಳು ಪರಸ್ಪರ ಸಂಬದ್ಧವಾದಂಥವು. ಭೂಮಿಯ ಮೇಲೂ ಆಂತರ್ಯದಲ್ಲೂ ನಾನಾ ಭೌತ ಹಾಗೂ ರಾಸಾಯನಿಕ ಕ್ರಿಯೆಗಳಾಗುತ್ತಲೇ ಇರುತ್ತವೆ. ಇವು ಭೂಮಿಯ ಮೇಲ್ಮೈಯನ್ನೂ ಸಾಗರ ತಳಗಳ ಆಕಾರವನ್ನೂ ಜಲಗುಣ ವಾಯುಗುಣಗಳನ್ನೂ ಬದಲಿಸುತ್ತಲೇ ಇರುತ್ತವೆ.  ಭೂಮಿಯ ಮೇಲ್ಮೈ ಲಕ್ಷಣಗಳಿಗೆ ಅನುಗುಣವಾಗಿ ಪ್ರಾದೇಶಿಕ ಭಿನ್ನತೆಗಳಿಗೆ ಸಂಬಂಧಿಸಿದಂತೆ ಹಾಗೂ ಪಾರಸ್ಪರಿಕವಾಗಿ ಪ್ರತಿವರ್ತಿಸುತ್ತ ಪರಿವರ್ತನೆಗೊಳ್ಳುತ್ತ ಸಸ್ಯ ಹಾಗೂ ಪ್ರಾಣಿಗಳು ಈ  ಭೂಮಿಯ ಮೇಲೆ ಹರಡಿಕೊಂಡಿವೆ.  ಪ್ರಾಣಿಗಳಲ್ಲಿ ಒಂದಾದ ಮಾನವನೂ ಈ ನಾನಾ ಬಲ ಪ್ರವೃತ್ತಿ ಮತ್ತು ಪ್ರಕ್ರಿಯೆಗಳಿಂದ ಸ್ವತಂತ್ರನಲ್ಲ; ಜೊತೆಗೆ ಆರ್ಥಿಕ ರಾಜಕೀಯ ಹಾಗೂ ಸಾಮಾಜಿಕ ಪ್ರಕ್ರಿಯೆಗಳಿಂದಲೂ ಆತ ಪ್ರಭಾವಿತನಾಗುತ್ತಾನೆ. ಅವನ ವಾಸ, ಜೀವನವಿಧಾನ ಮುಂತಾದವುಗಳ ಮೇಲೆ ಈ ಪ್ರಭಾವಗಳು ಕೆಲಸಮಾಡುತ್ತವೆ.  ಮಾನವನಿಗೂ ನಿಸರ್ಗಕ್ಕೂ ಎಂದರೆ ಅವನ ಪರಿಸರಕ್ಕೂ ನಡುವೆ ಕ್ರಿಯೆ ಪ್ರತಿಕ್ರಿಯೆಗಳು ನಡೆಯುತ್ತಲೇ ಇರುತ್ತವೆ.  ಮಾನವ ತನ್ನ ಪರಿಸರವನ್ನು ತನಗೆ ಅನುಕೂಲವಾಗುವಂತೆ ಪರಿವರ್ತಿಸಲು ಸದಾ ಹೆಣಗಾಡುತ್ತಲೇ ಇರುತ್ತಾನೆ.  ನಿಸರ್ಗವೂ ಅವನ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುತ್ತಿದ್ದು ಅವನ ಜೀವನವನ್ನು ನಿಯಂತ್ರಿಸುತ್ತಿರುತ್ತದೆ. ಕೆಲವು ನಿಟ್ಟುಗಳಲ್ಲಿ ನಿಸರ್ಗವನ್ನು ಗೆಲ್ಲುವ ಯತ್ನದಲ್ಲಿ ಅಂದರೆ ಅದನ್ನು ಪರಿವರ್ತಿಸಿಕೊಳ್ಳುವಲ್ಲಿ ಮಾನವ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾನೆ.  ಇನ್ನು ಕೆಲವು ನಿಟ್ಟುಗಳಲ್ಲಿ ಅವನೇ ನಿಸರ್ಗದ ಬಲಗಳಿಗೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ.  ಅಂತೂ ನಿಸರ್ಗ ಹಾಗೂ ಮಾನವ ನಡುವಿನ ಕ್ರಿಯೆ ಪ್ರಕ್ರಿಯೆಗಳ ಹಾಗೂ ಪ್ರಕ್ರಿಯೆಗಳ ಪರಿಣಾಮವಾಗಿ ಈ ಭೂಮಿಯ ಮೇಲ್ಮೈ ವಿಭಿನ್ನ ಹಾಗೂ ವಿಶಿಷ್ಟ ಪ್ರದೇಶಗಳಿಗಾಗಿ ರೂಪುಗೊಂಡಿದೆ.  ಕಾರಣ ಹಾಗೂ ಪರಿಣಾಮಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರದೇಶಗಳ ಸಮಾನತೆ ವಿಭಿನ್ನತೆಗಳ ಪ್ರಾಮುಖ್ಯವನ್ನು ಅರ್ಥವಿಸುವುದು, ವಿವರಿಸುವುದು, ವ್ಯಾಖ್ಯಿಸುವುದು ಮತ್ತು ವ್ಯಾಖ್ಯಾನಿಸುವುದು ಭೂಗೋಳಶಾಸ್ತ್ರದ ಗುರಿ.

	ಪ್ರಾಚೀನ ಹಾಗೂ ಮಧ್ಯಯುಗಗಳಲ್ಲಿ ವಿವಿಧ ದೇಶಗಳ ಗುಣಲಕ್ಷಣಗಳನ್ನು ಗುರುತಿಸಿ ವಿವರಿಸುವುದಷ್ಟೇ ಭೂಗೋಳಶಾಸ್ತ್ರಜ್ಞರಿಗೆ ಸಾಧ್ಯವಾಗಿತ್ತು.  ಯಾವುದೇ ಪರಿಸ್ಥಿತಿಯ ಹಿಂದಿನ ಕಾರಣವನ್ನು ಅವರು ಅನೇಕ ವೇಳೆ ಊಹೆಯಿಂದ ಹೇಳಲು ಯತ್ನಿಸುತ್ತಿದ್ದರು.  ಒಮ್ಮೊಮ್ಮೆ ಅವರ ಊಹೆ ನಿಜವಾಗುತ್ತಿತ್ತು.  ಪ್ರದೇಶಗಳನ್ನು ಅಳೆಯುವ ಹಾಗೂ ಭೂಪಟದ ಮೇಲೆ ಗುರುತಿಸುವ ಕಾರ್ಯದಲ್ಲೂ ಅವರು ತೊಡಗಿದ್ದರು.  ತಾವು ವಾಸಿಸುವ ಸ್ಥಾನಗಳಿಂದ ದೂರದೂರ ಪ್ರದೇಶಗಳಿಗೆ ಪ್ರವಾಸಮಾಡಿ ಅಲ್ಲಿಯ ವೈಶಿಷ್ಟ್ಯಗಳನ್ನು ಗುರುತಿಸುವ ಮತ್ತು ತೌಲನಿಕವಾಗಿ ಅಧ್ಯಯನ ಮಾಡುವ ಪರಿಪಾಟ ಬೆಳೆಯಿತು. ಪರಿಶೋಧನೆ ಮತ್ತು ಪ್ರವಾಸ ಇವು ಭೂಗೋಳಶಾಸ್ತ್ರದ ಒಂದು ಮುಖ್ಯ ಕಾಳಜಿ.  ಲಿಖಿತೇತಿಹಾಸದ ಕಾಲಕ್ಕೂ ಹಿಂದಿನಿಂದ ಇದು ಬೆಳೆದುಬಂದಿದೆ.  ಪ್ರವಾಸಿಗಳು ತಮ್ಮ ಪ್ರವಾಸಕಾಲದಲ್ಲಿ ಕಂಡದ್ದನ್ನು ಇತರರಿಗೆ ಹೇಳಿಕೊಳ್ಳುತ್ತಿದ್ದರು, ಬರೆದಿಡಲೂ ತೊಡಗಿದರು.  ಹೀಗೆ ಒಂದು ರೀತಿಯಲ್ಲಿ ಭೂಗೋಳಶಾಸ್ತ್ರ ಬೆಳೆಯಿತು.  ಪರಿಶೋಧನಾತ್ಮಕ ಪ್ರವಾಸ ಹೆಚ್ಚಾಗಿ ಬೆಳೆದಂತೆ ಭೂಪಟ ರಚನೆಯ ವಿಧಾನಗಳು ರೂಪಿತವಾದುವು. ಭೂಖಂಡಗಳ ಎಲ್ಲೆಗಳನ್ನು ಹೆಚ್ಚು ಕಡಿಮೆ ಕರಾರುವಾಕ್ಕಾಗಿ ರಚಿಸುವುದು ಸಾಧ್ಯವಾಯಿತು.  ನದಿಗಳ ಹರಿವುಗಳನ್ನು ನಿರ್ಧರಿಸಲಾಯಿತು.  ಪರ್ವತಗಳ ಸನ್ನಿವೇಶಗಳನ್ನು ಸರ್ವೇಕ್ಷಣೆಯ ಮೂಲಕ ಗೊತ್ತುಪಡಿಸುವುದು ಸುಲಭವಾಯಿತು.

	ಇವೆಲ್ಲ ಪ್ರಗತಿಗಳೊಂದಿಗೆ ವೈಜ್ಞಾನಿಕ ಅಧ್ಯಯನ ಇನ್ನೊಂದು ಮಜಲು ಮುನ್ನಡೆಯಿತೆನ್ನಬಹುದು.  18ನೆಯ ಶತಮಾನದ ವೇಳೆಗೆ ಭೂಗೋಳಶಾಸ್ತ್ರಜ್ಞರು ಯಥೇಷ್ಟ ದತ್ತಾಂಶಗಳನ್ನು ಸಂಗ್ರಹಿಸಿಕೊಂಡಿದ್ದರು.  ಭೌತಲಕ್ಷಣ ಹಾಗೂ ಸಂರಚನೆ, ಸಸ್ಯಪ್ರಾಣಿವರ್ಗ, ಆರ್ಥಿಕ ಜೀವನ, ರಾಜಕೀಯ, ರಾಷ್ಟ್ರೀಯ ಎಲ್ಲೆಗಳು ಮುಂತಾದವುಗಳ ವಿಚಾರದಲ್ಲಿ ಏಕರೂಪವಾದ ಪ್ರದೇಶಗಳನ್ನು ಖಚಿತವಾಗಿ ಗುರುತಿಸಿ ಅಧ್ಯಯನ ಮಾಡುವುದು ಸಾಧ್ಯವಾಯಿತು.

	ಪ್ರಪಂಚದ ಅರಿವು ಹೆಚ್ಚಾದಂತೆಲ್ಲ ಭೌಗೋಳಿಕ ಅಧ್ಯಯನಗಳು ಹೆಚ್ಚು ಹೆಚ್ಚು ಖಚಿತವಾಗತೊಡಗಿದುವು.  ಒಂದೇ ಬಗೆಯ ಪ್ರತಿಕ್ರಿಯೆಯ ಫಲವಾದ್ದರಿಂದಾಗಿ ದೂರದೂರ ಇದ್ದೂ ಸಮಾನ ಲಕ್ಷಣಗಳಿಂದ ಕೂಡಿದ್ದೂ ಪರಸ್ಪರ ಸಂಬಂಧ ಉಳ್ಳ ಗುಣಲಕ್ಷಣಗಳ ಕ್ರಮಬದ್ಧ ಅಭ್ಯಾಸಕ್ಕೆ ಗಮನ ಸಲ್ಲತೊಡಗಿತು.  ಭೂಗೋಳಶಾಸ್ತ್ರ ವಿಶಿಷ್ಟವಾದ ಒಂದು ಜ್ಞಾನಕ್ಷೇತ್ರವೇ ಅಲ್ಲ, ಇದು ಹಲವು ಬೇರೆ ಬೇರೆ ಶಾಸ್ತ್ರಗಳ ಕೂಡಿಕೆಯಷ್ಟೆ ಎಂಬುದಾಗಿ ಹೇಳುವುದುಂಟು.  ಆದರೆ ವಾಸ್ತವವಾಗಿ ಇದಕ್ಕೆ ವಿಲೋಮವಾದ ದೃಷ್ಟಿ ಹೆಚ್ಚು ಸರಿ.  ಭೂಮಿಯನ್ನು ಕುರಿತಂತೆ ಭೌತ ಹಾಗೂ ರಾಸಾಯನಿಕ ಕ್ರಿಯೆಗಳ ಹಾಗೂ ಸಾಮಾಜಿಕ ಕಲಾಪಗಳ ಅಧ್ಯಯನಗಳೇ ಇದರಿಂದ ಬೇರೆಬೇರೆಯಾಗಿ ಕ್ರಮೇಣ ಕವಲೊಡೆದುವು.  ಹೀಗಾಗಿ ಭೂಗೋಳಶಾಸ್ತ್ರವನ್ನು ವಿಜ್ಞಾನಗಳ ತಾಯಿ ಎಂದು ಕರೆಯುವುದು ಹೆಚ್ಚು ಯುಕ್ತವಾದ್ದು.  ಭೂಮಿಗೆ ಸಂಬಂಧಿಸಿದ ವಿಭಿನ್ನ ಪ್ರಕ್ರಿಯೆಗಳನ್ನು ಬೇರೆಬೇರೆಯಾಗಿ ಅಧ್ಯಯನಮಾಡುವ ಪದ್ಧತಿ ಕ್ರಮೆಣ ಬೆಳೆಯಿತು.

	ಭೌಗೋಳಿಕ ಅಧ್ಯಯನದ ಸ್ವರೂಪದಿಂದಾಗಿ ಭೂಗೋಳಶಾಸ್ತ್ರವನ್ನು ಯಾವುದೇ ವ್ಯಾಖ್ಯೆಗೆ ಒಳಪಡಿಸುವುದಕ್ಕಾಗುವುದಿಲ್ಲ.  ಈ ಲೇಖನದ ಆರಂಭದಲ್ಲಿ ನೀಡಿರುವ ವ್ಯಾಖ್ಯೆ ಒಂದು ಸ್ಥೂಲ ಹೊರರೇಖೆ ಮಾತ್ರ. ಭೂಮಿಯ ಪಾತಳಿಯ ಮೇಲೆ ಅಸಮವಾಗಿ ವಿತರಣೆಗೊಂಡಿರುವ ಯಾವುದನ್ನೇ ಆಗಲಿ ಭೂಗೋಳ ಶಾಸ್ತ್ರೀಯ ಅಧ್ಯಯನ ವಿಧಾನಗಳಿಗೆ ಒಳಪಡಿಸುವುದು ಸಾಧ್ಯ.  ಆದ್ದರಿಂದ ಭೂಗೋಳಶಾಸ್ತ್ರವನ್ನು ಒಂದು ನಿಲುವು, ಒಂದು ನೋಟದ ನಿಟ್ಟು, ದೃಷ್ಟಿ ಕೋನ, ಪ್ರಕ್ರಿಯೆಗಳ ವ್ಯವಸ್ಥೆ ಎನ್ನಬಹುದು.

	ಇದುವರೆಗೆ ಇಲ್ಲಿ ಮಾಡಿರುವ ವಿವೇಚನೆಯ ದೃಷ್ಟಿಯಿಂದ ಭೂಗೋಳ ಶಾಸ್ತ್ರದ ಉಪಯುಕ್ತತೆಯನ್ನು ಈ ರೀತಿ ಗುರುತಿಸಬಹುದು: 1 ಯಾವುದೇ ಪ್ರಕ್ರಿಯೆಯ ತಾತ್ತ್ವಿಕ ಸ್ವರೂಪವನ್ನು ಯಾವುದೇ ನಿರ್ದಿಷ್ಟ ಸ್ಥಳದ ಸಮಗ್ರ ಪರಿಸರದ ಪರಿಸ್ಥಿತಿಯಲ್ಲಿಟ್ಟು ನೋಡಿ, ಈ ಪರಿಸರದ ಪರಿಸ್ಥಿತಿಯಿಂದಾಗಿ ಅದು ಹೇಗೆ ಮಾರ್ಪಾಡುಗೊಳ್ಳುವುದೆಂಬುನ್ನು ಅರಿಯಬಹುದಾದ್ದರಿಂದ ಕ್ರಮಬದ್ಧ ವಿಜ್ಞಾನಗಳ ಕಾಣ್ಕೆಗಳಿಗೆ ಹೆಚ್ಚಿನ ಆಯಾಮಗಳು ಪ್ರಾಪ್ತವಾಗುತ್ತವೆ.  2 ಕ್ರಮಬದ್ಧ ವಿಜ್ಞಾನಗಳು ರೂಪಿಸುವ ಪರಿಕಲ್ಪನೆಗಳು ಎಷ್ಟರಮಟ್ಟಿಗೆ ಸಮಂಜಸ ಸಪ್ರಮಾಣ ಎಂಬುದನ್ನರಿಯಲು ಸಾಧ್ಯವಾಗುತ್ತದೆ. 3 ಯಾವುದೇ ಸ್ಥಳದ ಅಥವಾ ಪ್ರದೇಶದ ಪರಿಸ್ಥಿತಿಗಳ ವಸ್ತುನಿಷ್ಠ ವಿಶ್ಲೇಷಣೆ ಮಾಡಬಹುದಾದ್ದರಿಂದ ಯಾವುದೇ ನೀತಿ ನಿರ್ಧರಿಸುವಾಗ ಯಾವ ವಿಚಾರಗಳನ್ನು ಅಥವಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬುದನ್ನು ತಿಳಿಯಲು ಈ ವಿಶ್ಲೇಷಣೆ ನೆರವಾಗುತ್ತದೆ.

	ಬೆಳೆವಣಿಗೆ: ಭೂಗೋಳ ಸಂಬಂಧ ಅಧ್ಯಯನ ಮಾನವನ ನಾಗರಿಕತೆಯಷ್ಟೇ ಹಳೆಯದಾದರೂ ಅದು ಒಂದು ಸಮಗ್ರಶಾಸ್ತ್ರವಾಗಿ ಬೆಳೆಯತೊಡಗಿದ್ದು 17 ನೆಯ ಶತಮಾನದಲ್ಲಿ.  ಈ ಶಾಸ್ತ್ರದ ಅಧ್ಯಯನ ಪ್ರಾಚೀನ ಗ್ರೀಕರಿಂದ ಆರಂಭವಾಯಿತು ಭೂಮಿಯ ಗೋಳ ಸ್ವರೂಪವನ್ನು ಮೊತ್ತಮೊದಲು ಕಂಡುಕೊಂಡವ ಮಿಲೇಟಸಿನ ಥೇಲ್ಸ್. ಅರಿಸ್ಟಾಟಲ್ ಇದನ್ನು ಪ್ರಯೋಗಿಸಿ ಭೂಗೋಳದ ವಾಸಯೋಗ್ಯ ಭಾಗಗಳನ್ನು ಗುರುತಿಸಿದ.  ಭೌತ ಪರಿಸರಕ್ಕೆ ಮಾನವಜೀವಿಗಳು ಹೇಗೆ ಹೊಂದಿಕೊಳ್ಳುವರೆಂಬುದನ್ನು ಅಧ್ಯಯನ ನಡೆಸಿದವ ಸ್ಟ್ರಾಬೋ.  ಈತನದು ಗಣಿತೀಯ ದೃಷ್ಟಿ. ಈ ಎಲ್ಲ ಅಧ್ಯಯನಗಳೂ ಟಾಲೆಮಿಯ ಕೃತಿಯಲ್ಲಿ ಸಮಾವೇಶಗೊಂಡವು. ರೋಮನರು ಈ ಕೆಲಸ ಮುಂದುವರಿಸಿದರು. ಆದರೆ ಅಂಧಕಾರ ಯುಗದಲ್ಲಿ ಯೂರೊಪಿನಲ್ಲಿ ಹೇಳಿಕೊಳ್ಳುವಂಥ ಭೂಗೋಳಶಾಸ್ತ್ರಜ್ಞರು ಯಾರೂ ಇರಲಿಲ್ಲ.  ಆಗ ಪ್ರವಾಸಿಗಳ ಕಥನಗಳು ಭೂಮಿಯನ್ನು ಕುರಿತ ಮಾಹಿತಿಯನ್ನು ಬೆಳೆಸಿದವು.

	ಮಧ್ಯ ಯುಗದಲ್ಲಿ ಮಾರ್ಕೊಪೋಲೋನ ಪ್ರವಾಸಗಳೊಂದಿಗೆ ಭೌಗೋಳಿಕ ಆಸಕ್ತಿ ಮತ್ತೆ ಗರಿಗೆದರಿತು.  ವ್ಯಾಪಾರದ ಬೆಳೆವಣಿಗೆ, ಪರಿಶೋಧನಾತ್ಮಕ ಪ್ರವಾಸಗಳು, ಅಮೆರಿಕದ ಆವಿಷ್ಕಾರ ಇವೆಲ್ಲ ಇದಕ್ಕೆ ಪುಷ್ಟಿ ನೀಡಿದುವು.  16 ಮತ್ತು 17ನೆಯ ಶತಮಾನಗಳಲ್ಲಿ ಭೂಗೋಳ ಕುರಿತ ಗ್ರಂಥಗಳೂ ಭೂಪಟಗಳೂ (ಮರ್ಕೇಟರ್) ಪ್ರಕಟವಾದುವು.  ಹೀಗೆ ಭೂಗೋಳಶಾಸ್ತ್ರಕ್ಕೆ ಸೈದ್ಧಾಂತಿಕ ಅಸ್ತಿವಾರ ನಿರ್ಮಾಣವಾಗತೊಡಗಿತು. ವ್ಯಾಪಾರಿಗಳೂ ಪರಿಶೋಧಕರೂ ಪಾದ್ರಿಗಳೂ ಭೂಮಿಯನ್ನು ಕುರಿತ ಅಧ್ಯಯನದಲ್ಲಿ ಆಸಕ್ತಿ ಕುದುರುವಂತೆ ಮಾಡಿದರು. ಭೂಗೋಳಶಾಸ್ತ್ರದ ಪಿತನೆಂದು ಪರಿಗಣಿತನಾದ ಬರ್ನಾರ್ಡ್ ಒರಿನಿಯಸ್ 17ನೆಯ ಶತಮಾನದಲ್ಲಿ ಜನಿಸಿದ. ಅವನು ಈ ಶಾಸ್ತ್ರವನ್ನು ಸಾಮಾನ್ಯ (ಜನರಲ್), ವಿಶಿಷ್ಟ (ಸ್ಪೆಷಲ್) ಮತ್ತು ತೌಲನಿಕ (ಕಂಪ್ಯಾರೆಟಿವ್) ಎಂದು ವಿಂಗಡಿಸಿದ: ಭೂಗೋಳವನ್ನು ಕುರಿತದ್ದು ಸಾಮಾನ್ಯ ಅಥವಾ ಸಾರ್ವತ್ರಿಕ ಭೂಗೋಳಶಾಸ್ತ್ರ, ದೇಶಗಳನ್ನು ಕುರಿತದ್ದು ವಿಶಿಷ್ಟ ಭೂಗೋಳ ಶಾಸ್ತ್ರ, ಅಕ್ಷಾಂಶ ರೇಖಾಂಶಾನುಗುಣವಾಗಿ ವಿಭಿನ್ನ ಪ್ರದೇಶ ಪರಿಸ್ಥಿತಿಗಳನ್ನು ಹೋಲಿಸಿ ನೋಡುವುದು ತೌಲನಿಕ ಭೂಗೋಳಶಾಸ್ತ್ರ. ಪರ್ವತಗಳನ್ನು ಗಾತ್ರ ಎತ್ತರಗಳಿಗೆ ಅನುಗುಣವಾಗಿ ವರ್ಗೀಕರಿಸಲೂ ಒರಿನಿಯಸ್ ಪ್ರಯತ್ನಿಸಿದ.

	1650ರಿಂದ 1850ರ ತನಕದ ಅವಧಿಯನ್ನು ವಸ್ತು ಸಂಗತಿಗಳ ಅರಿವಿನ ಕಾಲವೆಂದು ವರ್ಣಿಸಬಹುದು.  ಮಾನವಕುಲ ವಿವರಣಶಾಸ್ತ್ರ (ಎತ್ನಾಗ್ರಫಿ) ಈ ಅವಧಿಯಲ್ಲಿ ವಿಕಾಸ ಹೊಂದಿತು.  ಪ್ರಪಂಚದ ವಾಣಿಜ್ಯ ವೇಗವಾಗಿ ಬೆಳೆಯುತ್ತಿದ್ದ ಈ ಕಾಲದಲ್ಲಿ ಭೂಗೋಳ ಶಾಸ್ತ್ರದ ಪರಿಮಾಣಾತ್ಮಕ ವಿಧಾನಗಳು ಮೂಡಿದುವು. ಈ ಕಾಲದ ಪರಿಶೋಧನೆ ಪ್ರವಾಸಗಳಿಂದಾಗಿ ಭೌತ ಹಾಗೂ ಜೈವಿಕ ವಿತರಣೆಗಳ ಅಧ್ಯಯನ ದಟ್ಟವಾಗಿ ಮುಂದುವರಿಯಿತು. ಜರ್ಮನಿಯ ಅಲೆಗ್ಸಾಂಡರ್ ಫಾನ್‍ಹುಂಬೋಲ್ಟ್ (1769-1859) ದಕ್ಷಿಣ ಅಮೆರಿಕ ಸೈಬಿರಿಯಗಳಲ್ಲಿ ಪ್ರವಾಸ ಕೈಗೊಂಡ. ಜೋಸೆಫ್ ಹೂಕರ್ ಉತ್ತರಭಾರತದಲ್ಲಿ ಸಂಚಾರ ಕೈಗೊಂಡನಲ್ಲದೆ ಅಂಟಾರ್ಕ್‍ಟಿಕಕ್ಕೆ ಭೇಟಿ ನೀಡಿದ ಕೂಡ.  ಆಗ್ನೇಯ ಏಷ್ಯದಲ್ಲಿ ಎ. ಆರ್. ವಾಲೇಸ್ ಜೀವಿ ವಿಜ್ಞಾನದಲ್ಲಿ ಅಧ್ಯಯನ ನಡೆಸಿದ.  ಚಾಲ್ರ್ಸ್ ಡಾರ್ವಿನ್ ಪ್ರಪಂಚ ಪ್ರದಕ್ಷಿಣೆ ಮಾಡಿದ.  ಇವೆಲ್ಲವೂ ಭೂಗೋಳಶಾಸ್ತ್ರದ ಅಧ್ಯಯನ ಸೀಮೆಯನ್ನು ವಿಸ್ತಾರಗೊಳಿಸಿದುವು.

	18ನೆಯ ಶತಮಾನದ ಅಂತ್ಯದೊಂದಿಗೆ ಭೂಗೋಳಶಾಸ್ತ್ರದ ಇತಿಹಾಸದಲ್ಲಿ ಆಧುನಿಕ ಅವಧಿ ಆರಂಭವಾಯಿತು.  ಅಲೆಗ್ಸಾಂಡರ್ ಫಾನ್ ಹುಂಬೋಲ್ಟ್ ಮತ್ತು ಕಾರ್ಲ್‍ರಿಟ್ಟರ್ (1779-1859) ಇದರ ಹರಿಕಾರರು.  ಭೂಗೋಳ ಶಾಸ್ತ್ರದ ಉಪಗಮನಕ್ಕೆ (ಅಪ್ರೋಚ್) ಸಂಬಂಧಿಸಿದಂತೆ ಎರಡು ಮುಖ್ಯ ವಿಧಾನಗಳು ರೂಪುಗೊಂಡವು: ಸಮಗ್ರ ವ್ಯವಸ್ಥೆ ಕುರಿತ ವಿಧಾನ ಒಂದು; ಪ್ರಾದೇಶಿಕ ವಿಧಾನ ಇನ್ನೊಂದು.  ಭೂಗೋಳಶಾಸ್ತ್ರ ಎರಡು ಕವಲುಗಳಾಗಿ ಒಡೆಯಿತು.  ಮಾನವ ಭೂಗೋಳಶಾಸ್ತ್ರ, ಭೌತಿಕ ಭೂಗೋಳಶಾಸ್ತ್ರ.  ಮಾನವನನ್ನು ಅವನ ಭೌತಿಕ ಕುಂದಣದಲ್ಲಿಟ್ಟು ಪರಿಸರದೊಂದಿಗೆ ಅವನ ಸಂಬಂಧಗಳನ್ನು ಅವಲೋಕಿಸುವುದು ಮಾನವಭೂಗೋಳಶಾಸ್ತ್ರ. ಪ್ರಪಂಚದ ಭೂವಿನ್ಯಾಸಗಳನ್ನು ಕುರಿತದ್ದು ಭೌತಿಕ ಭೂಗೋಳಶಾಸ್ತ್ರ.  ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಭೂಗೋಳಶಾಸ್ತ್ರಗಳು ಮಾನವಭೂಗೋಳಶಾಸ್ತ್ರದ ಕವಲುಗಳು. ಭೂಗೋಳಶಾಸ್ತ್ರಕ್ಕೆ ಪ್ರಾದೇಶಿಕ ಪರಿಕಲ್ಪನೆಯನ್ನು ಅಳವಡಿಸಿದಾತ ರಿಟ್ಟರ್.  ಭೌಗೋಳಿಕ ಪ್ರದೇಶಗಳನ್ನು ರೂಪಿಸುವಲ್ಲಿ ಖನಿಜಗಳ ಹಾಗೂ ಸಸ್ಯಪ್ರಾಣಿವರ್ಗಗಳ ಪಾತ್ರಗಳನ್ನೂ ಈತ ಪರಿಗಣನೆಗೆ ತೆಗೆದುಕೊಂಡಿದ್ದಾನೆ.

	ತಿರುಳು, ವಿಧಾನವ್ಯವಸ್ಥೆ ಹಾಗೂ ಖಚಿತೋದ್ದೇಶಗಳಿಂದ ಭೂಗೋಳ ಶಾಸ್ತ್ರ ಪರಿಪುಷ್ಟವಾದ್ದು 19ನೆಯ ಶತಮಾನದಲ್ಲಿ.  ಹುಂಬೋಲ್ಟ್ 1859ರಲ್ಲಿ ತೀರಿಕೊಂಡ.  ಚಾಲ್ರ್ಸ್ ಡಾರ್ವಿನ್ನನ ದಿ ಆರಿಜಿನ್ ಆಫ್ ಸ್ಪಿಷೀಸ್ ಪ್ರಕಟವಾದ್ದು ಅದೇ ವರ್ಷ.  ನೈಸರ್ಗಿಕ ಆಯ್ಕೆಯಿಂದ ಪ್ರಪಂಚ ಪ್ರಕೃತದ ಅವಸ್ಥೆ ತಳೆದಿದೆಯೆಂದು ಆತ ಹೇಳಿದ.  ಅವನ ಪುಸ್ತಕ ಒಂದು ವಿಚಾರಜನಕ ಕೃತಿ.  ಜನರು ತಮ್ಮ ಆಲೋಚನಾ ವಿಧಾನಗಳನ್ನು ಬದಲಿಸಿಕೊಳ್ಳುವುದು ಅಗತ್ಯವಾಯಿತು.  ಪರ್ವತರಚನೆ ಕುರಿತ ವಾದ ಮತ್ತು ಡಾರ್ವಿನ್‍ವಾದ ಭೂಗೋಳ ಶಾಸ್ತ್ರವನ್ನೂ ಇತಿಹಾಸವನ್ನೂ ಒಟ್ಟಿಗೆ ತಂದವು.

	ಭೂಗೋಳಶಾಸ್ತ್ರದಲ್ಲಿ ಮಾನವನ ಪಾತ್ರದ ಮೇಲೆ ಬೆಳಕು ಚೆಲ್ಲಿದಾತ ಫ್ರೀಡ್ರಿಕ್ ರ್ಯಾಟೆó್ಜóಲ್ (1844-1904) ಮಾನವ ಜೀವಿಪರಿಸ್ಥಿತಿ ಶಾಸ್ತ್ರ ಎಂಬ ಪದವನ್ನು ಮೊದಲು ಬಳಸಿದಾತ ಬ್ಯಾರೋಸ್, 1925ರಲ್ಲಿ.  ಭೂಗೋಳಶಾಸ್ತ್ರದಲ್ಲಿ ನಿರ್ಣಯಾತ್ಮಕ ಧೋರಣೆಗಳಿಗಿಂತ ನಿಲುವು, ಗುರಿ, ಉದ್ದೇಶ ಮತ್ತು ವಿಧಾನ ಹೆಚ್ಚು ಮುಖ್ಯ ಎಂದು ಅದೇ ವರ್ಷ ಹೇಳಿದಾತ ಸಿ.ಓ. ಸೌರ್. ಸಾಂಸ್ಕøತಿಕ ದೃಷ್ಟಿಯತ್ತ ಗಮನ ಹರಿದದ್ದೂ ಈ ಕಾಲದಲ್ಲೇ.  ವಿಭಿನ್ನತೆ ಕುರಿತ ಪ್ರಾದೇಶಿಕ ಪರಿಕಲ್ಪನೆಗಳಿಗೆ ಹೆಚ್ಚು ಹೆಚ್ಚು ಪ್ರಾಧಾನ್ಯ ದೊರಕತೊಡಗಿತು.  ಪ್ರದೇಶದ ಶೃಂಗ ಅಥವಾ ಶಿಖರ ಪ್ರಾಯವಾದ ಪಟ್ಟಣದ ಅಧ್ಯಯನಕ್ಕೆ ವಿಶೇಷ ಗಮನ ಸಂದಿತು.  ಹೀಗೆ ಭೂಗೋಳ ಶಾಸ್ತ್ರದ ವಿವಿಧ ಪರಿಕಲ್ಪನೆಗಳೂ ಪ್ರಭೇದಗಳೂ ಕ್ರಮಕ್ರಮವಾಗಿ ರೂಪುಗೊಂಡವು.

	ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಭೂಗೋಳಶಾಸ್ತ್ರ ಕುರಿತು ಜ್ಞಾನ ಅಗಾಧವಾಗಿ ವಿಕಾಸಹೊಂದಿದೆ.  ಈ ಅವಧಿಯಲ್ಲಾಗಿರುವ ಪ್ರಗತಿಯ ಮುಖ್ಯ ಲಕ್ಷಣಗಳು ಇವು: 1 ವ್ಯಾಪಕ ದೃಷ್ಟಿಗಿಂತ ವಿಶಿಷ್ಟ ಕ್ಷೇತ್ರದ ಸಾಂದ್ರ ಅಧ್ಯಯನ, ವಿಶೇಷ ಜ್ಞಾನ.  2 ವಿವಿಧ ಶಾಸ್ತ್ರಗಳ ಸಮನ್ವಯ ದೃಷ್ಟಿಯ ವಿಕಾಸ. ಉದಾಹರಣೆಗೆ ಭೌಗೋಳಿಕ ರಾಜ್ಯಶಾಸ್ತ್ರ, ಪ್ರಾಣಿ ಭೂಗೋಳಶಾಸ್ತ್ರ, ಜೀವಿವಿಜ್ಞಾನ, ಗ್ರಾಮೀಣ ಅಭಿವೃದ್ಧಿ.  ಒಟ್ಟಿನಲ್ಲಿ ವಿವಿಧ ಜ್ಞಾನ ಶಾಖೆಗಳು ಭೂಗೋಳಶಾಸ್ತ್ರದ ಸೀಮೆಯನ್ನು ವಿಸ್ತರಿಸಿವೆ.

	ವ್ಯಾಪ್ತಿ, ವಿಭಜನೆ: ಭೂಗೋಳ ಶಾಸ್ತ್ರಜ್ಞರ ಆಸಕ್ತಿಯ ಕ್ಷೇತ್ರ ಬಕಳ ವಿಶಾಲವಾದ್ದು.  ಭೂಮಿ ವಿಜ್ಞಾನ (ಅರ್ತ್‍ಸೈನ್ಸ್), ಸಮಾಜ ವಿಜ್ಞಾನ ಮತ್ತು ಜ್ಯಾಮಿತಿಗಳಿಂದ ಅನುಮಿತವಾದ್ದು ಭೂಗೋಳಶಾಸ್ತ್ರದ ಕ್ಷೇತ್ರವೆಂದು ಮಾಂಕ್‍ಹೌಸ್ ಹೇಳಿದ್ದಾನೆ.  ಭೂಮಿವಿಜ್ಞಾನ ಹಾಗೂ ಸಮಾಜವಿಜ್ಞಾನಗಳ ನಡುವಣ ಸಂಕ್ರಮ ವಲಯದಲ್ಲಿ ಭೂಗೋಳಶಾಸ್ತ್ರದ ಕ್ಷೇತ್ರವಿದೆ. ಮಾನವ ಹಾಗೂ ಅವನ ಪರಿಸರದ ನಡುವಣ ಸಂಬಂಧವನ್ನು ಇದು ಪರೀಕ್ಷಿಸುತ್ತದೆ. ಭೂಗೋಳಶಾಸ್ತ್ರಜ್ಞರ ಆಸಕ್ತಿಯ ವಿಷಯಗಳು ಈ ಮುಂದಿನವು: 1 ಭೂಮಿಯ ಗಾತ್ರ, ಆಕಾರ ಹಾಗು ಚಲನೆ; 2  ಭೂಖಂಡಗಳ ಹಾಗೂ ಜಲರಾಶಿಗಳ ಸನ್ನಿವೇಶ ಹಾಗೂ ವಿತರಣೆ; 3 ಶಿಲೆಗಳಿಗೆ ಸಂಬಂದಿಸಿದಂತೆ ಭೂಮಿಯ ಮೇಲ್ಮೈಯ ಸಂರಚನೆ ಹಾಗೂ ಉಬ್ಬುತಗ್ಗುಗಳು; 4 ಸಾಗರ, ಸರೋವರ ಹಾಗೂ ನದಿ ಜಲರಾಶಿಗಳ ಗುಣಲಕ್ಷಣಗಳು ಹಾಗೂ ಚಲನೆಗಳು; 5 ವಾಯುಗುಣ ಹಾಗೂ ಹವಾಗುಣಕ್ಕೆ ಸಂಬಂಧಿಸಿದಂತೆ ವಾತಾವರಣ ಸ್ಥಿತಿಗತಿಗಳು; 6 ಭೂಮಿಯ ಮೇಲಣ ಸಸ್ಯವರ್ಗ, ಪ್ರಾಣಿಕೋಟಿ, ಜನಸಂಖ್ಯೆ ಇವುಗಳ ಹರವು ಮತ್ತು ಸಾಮಾಜಿಕ ಸಾಂಸ್ಕøತಿಕ ಹಾಗೂ ರಾಜಕೀಯ ಸಂಘಟನೆಗಳ ಗುಣಲಕ್ಷಣಗಳು ; 7 ಜನರ ಮತ್ತು ಅವರ ವಿವಿಧ ವಸತಿ ನೆಲೆಗಳ ಚಟುವಟಿಕೆಗಳು ಹಾಗೂ ಜೀವನೋಪಾಯಗಳು. ಹೀಗೆ ಭೂಗೋಳಶಾಸ್ತ್ರ ಭೂಮಿಯ ಮೇಲ್ಮೈಯ ಸ್ಥಿತಿಗತಿ ಸಂಗತಿಗಳನ್ನು ಕುರಿತಂತೆ ಎಲ್ಲಿ, ಏಕೆ, ಹೇಗೆ ಮತ್ತು ಎಂದು ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಯತ್ನಿಸುತ್ತದೆ.

	ಇಷ್ಟೊಂದು ವಾಪ್ತಿಯುಳ್ಳ ಭೂಗೋಳ ಶಾಸ್ತ್ರದ ಎಲ್ಲ ಶಾಖೆಗಳನ್ನೂ ಸಾಂಗೋಪಾಂಗವಾಗಿ ಅರಿತುಕೊಳ್ಳುವುದು ಯಾವೊಬ್ಬ ವಿದ್ವಾಂಸನಿಗೂ ಸಾಧ್ಯವಿಲ್ಲ. ಭೂಮಿಯ ಒಂದು ಭಾಗವನ್ನು ಉಳಿದ ಭಾಗಗಳಿಂದ ಪ್ರತ್ಯೇಕಿಸುವ ನಾನಾ ಬಗೆಯ ಪ್ರಕ್ರಿಯೆಗಳಿರುವಂತೆಯೇ ಭೂಗೋಳಶಾಸ್ತ್ರವನ್ನೂ ಅನೇಕ ಶಾಖೆಗಳಾಗಿ ಅಥವಾ ಅಧ್ಯಯನದ ಉಪಕ್ಷೇತ್ರಗಳಾಗಿ ವಿಂಗಡಿಸಬಹುದು. ಭೂಗೋಳಶಾಸ್ತ್ರದ ಪ್ರಮುಖ ಶಾಖೆಗಳನ್ನು ಅಥವಾ ಉಪಕ್ಷೇತ್ರಗಳನ್ನು ಮುಂದೆ ವಿವೇಚಿಸಲಾಗುತ್ತದೆ. ಭೂವಿಜ್ಞಾನ, ಹವಾಮಾನವಿಜ್ಞಾನ, ಖಗೋಳವಿಜ್ಞಾನ ಮಾನವಶಾಸ್ತ್ರ, ಪ್ರಾಣಿವಿಜ್ಞಾನ ಮುಂತಾದ ಅನೇಕ ವಿಜ್ಞಾನಗಳ ಅಡಿಯ ಅಧ್ಯಯನದ ಲಾಭs ಪಡೆದುಕೊಂಡಿರುವ ಭೂಗೋಳಶಾಸ್ತ್ರದಲ್ಲಿ ಪ್ರಮುಖವಾಗಿ ನಾಲ್ಕು ಶಾಖೆಗಳನ್ನು ಗುರುತಿಸಲಾಗಿದೆ: 1 ಭೂಮಿಯ ಆಕಾರ, ಗಾತ್ರ ಹಾಗೂ ಚಲನೆಗಳನ್ನು ಕುರಿತದ್ದು ಗಣಿತೀಯ ಭೂಗೋಳಶಾಸ್ತ್ರ, ಪ್ರಾಕೃತಿಕ ವಿಜ್ಞಾನವೇ (ಫಿಸಿಯಾಗ್ರಫಿ) ಇದೆಂದು ಅನೇಕ ವೇಳೆ ಬಹಳ ಸ್ಥೂಲವಾಗಿ ಪರಿಗಣಿಸಲಾಗಿರುವಂಥದು. 2 ಭೌತಿಕ ಭೂಗೋಳಶಾಸ್ತ್ರ, 3 ಜೀವಿಭೂಗೋಳಶಾಸ್ತ್ರವೂ ಸೇರಿದಂತೆ ಜೀವವಿಜ್ಞಾನ ಭೂಗೋಳಶಾಸ್ತ್ರ. 4 ಮಾನವ ಶಾಸ್ತ್ರಿಯ ಭೂಗೋಳ ಶಾಸ್ತ್ರವೇ ಇದೆಂದು ಕೆಲವು ವೇಳೆ ಪರಿಗಣಿಸಲಾದ ಮಾನವಭೂಗೋಳಶಾಸ್ತ್ರ.

	ಅಧ್ಯಯನ ದೃಷ್ಟಿಯಿಂದ ಭೂಗೋಳಶಾಸ್ತ್ರವನ್ನು ಈ ಮುಂದಿನ ಕ್ಷೇತ್ರಗಳಾಗಿ ವಿಂಗಡಿಸಬಹುದಾಗಿದೆ. ಇದು ಸ್ಥೂಲವಿಭಜನೆ ಮಾತ್ರ:

	1 ಜನಸಂಖ್ಯಾ ಭೂಗೋಳಶಾಸ್ತ್ರ: ಜನರ ವಿತರಣೆಯ ಭೂಪಟರಚನೆ ಮುಖ್ಯವಾದ್ದು. ವಿವಿಧ ಪ್ರದೇಶಗಳಲ್ಲಿ ಜನರ ಹಂಚಿಕೆ ವಯಸ್ಸು, ಲಿಂಗ, ಜನಾಂಗೀಯ ವಿನ್ಯಾಸ, ಧರ್ಮ ಹಾಗೂ ಭಾಷಾನುಗುಣವಾಗಿ ಅವರ ವಿಂಗಡಣೆ, ಜನರ ಚಲನೆ ಮುಂತಾದ ಅಂಶಗಳ ಅಧ್ಯಯನವನ್ನು ಇದು ಒಳಗೊಳ್ಳುತ್ತದೆ. ಇವನ್ನೆಲ್ಲ ಭೂಪಟಗಳಲ್ಲಿ ಗುರುತಿಸುವುದಲ್ಲದೆ ಪ್ರದೇಶಾನುಗುಣವಾಗಿ ಜನಸಂಖ್ಯೆ ಹಂಚಿಕೆಗೂ ಇತರ ಅಂಶಗಳಿಗೂ ಇರುವ ಸಂಬಂಧದ ಅಧ್ಯಯನವಿದು.

	2 ವಸತಿ ಭೂಗೋಳಶಾಸ್ತ್ರ: ಜನಸಂಖ್ಯಾ ಭೂಗೋಳಶಾಸ್ತ್ರಕ್ಕೂ ಇದಕ್ಕೂ ನಿಕಟಸಂಬಂಧವುಂಟು. ಜನಸಂಖ್ಯೆಯ ವಿಂಗಡಣೆಯ ಅಧ್ಯಯನದದೊಂದಿಗೆ ಅವರ ನಿವಾಸಗಳ ವಿತರಣೆಯ ವಿನ್ಯಾಸವನ್ನೂ ಅರಿಯಬಹುದಾಗಿದೆ. ಆದರೆ ವಸತಿ ಭೂಗೋಳಶಾಸ್ತ್ರ ಇದನ್ನೂ ಮೀರಿ ಬೆಳೆದಿದೆ. ಒಂದು ಪ್ರದೇಶದಲ್ಲಿ ನೆಲೆಸುವ ಜನರು, ನಿರ್ಮಿಸಿಕೊಳ್ಳುವ ಎಲ್ಲ ಸೌಲಭ್ಯಗಳನ್ನೂ ಇಲ್ಲಿ ಅಧ್ಯಯನ ಮಾಡಲಾಗುತ್ತದೆ. ಗೃಹಗಳ ಹಾಗೂ ಇತರ ಕಟ್ಟಡಗಳ ರೂಪ ಹಾಗೂ ಕಾರ್ಯಭಾರಗಳು, ರಸ್ತೆಗಳ ಹಾಗೂ ಇತರ ಆಸ್ತಿಗಳ ವಿನ್ಯಾಸಗಳು ಇವನ್ನೆಲ್ಲ ಕುರಿತದ್ದು ಈ ವಿಭಾಗ.

	3 ಪಟ್ಟಣ ಭೂಗೋಳಶಾಸ್ತ್ರ: ನಗರಗಳ ವಿನ್ಯಾಸ, ಅವುಗಳ ಆಂತರಿಕ ಸಂರಚನೆ, ಅವುಗಳೊಳಗೆ ವಿವಿಧ ಕಾರ್ಯಭಾರಗಳಿಗೆ ಸಂಬಂಧಿಸಿದ ವಿಭಾಗಗಳು, ಅಲ್ಲಿ ಲಭ್ಯವಿರುವ ಸೇವೆಗಳು, ಸರಕುಗಳ ಸಾಗಣೆ, ಇತರ ಚಟುವಟಿಕೆಗಳು ಇವುಗಳ ಅಧ್ಯಯನವನ್ನು ಈ ವಿಭಾಗ ಒಳಗೊಳ್ಳುತ್ತದೆ. ನಗರ ಯೋಜನೆಗೆ ಇದು ತಳಹದಿ.

	4 ರಾಜಕೀಯ ಭೂಗೋಳಶಾಸ್ತ್ರ: ರಾಜಕೀಯವಾಗಿ ಸಂಘಟಿತವಾದ ಪ್ರದೇಶಗಳ ಅಧ್ಯಯನ. ಒಂದು ರಾಜ್ಯದ ವಿವಿಧ ಅಂಗಗಳಾದ ರಾಜಧಾನಿ, ಕೈಗಾರಿಕಾ ವಲಯ, ಜನಸಾಂದ್ರ ಪ್ರದೇಶಗಳು, ಗಡಿಪ್ರದೇಶಗಳು, ಕಚ್ಚಾಸಾಮಗ್ರಿ ಮೂಲಗಳು ಮುಂತಾದವನ್ನು ಕುರಿತ ಭೌಗೋಳಿಕ ಅಂಶಗಳಿಗೂ ಅದರ ಆಡಳಿತಕ್ಕೂ ಇರುವ ಸಂಬಂದ ವಿವೇಚನೆ. ಯಾವುದೇ ರಾಜ್ಯದ ಯಶಸ್ವೀ ಆಡಳಿತಕ್ಕೂ ರಾಜ್ಯದ ಭಾವನೆಗೂ (ಸ್ಟೇಟ್ ಐಡಿಯಾ) ನಿಕಟ ಸಂಬಂಧವಿದೆಯೆಂಬುದು ನಿಜ.  ಒಂದು ರಾಷ್ಟ್ರದ ಎಲ್ಲೆಯೊಳಗಿನ ಜನರು ವಿಭಿನ್ನ ರಾಜ್ಯ ಭಾವನೆಗಳುಳ್ಳವರಾಗಿದ್ದರೆ ಅದರ ಆಡಳಿತ ಸಮರ್ಪಕವೆನಿಸದು. ಇಂಥ ಭಾವನಾತ್ಮಕ ಅಂಶಗಳ ಜೊತೆಗೆ ಭೌಗೋಳಿಕ ಅಂಶಗಳೂ ಕೂಡಿಕೊಂಡಿರುತ್ತವೆ.

	5 ಆರ್ಥಿಕ ಭೂಗೋಳಶಾಸ್ತ್ರ: ವಿವಿಧ ಪ್ರದೇಶಗಳ ಸಾಮ್ಯ ವೈಷಮ್ಯಗಳನ್ನು ಅಧ್ಯಯನ ಮಾಡುವಾಗ ಅವುಗಳ ಆರ್ಥಿಕ ಪ್ರಕ್ರಿಯೆಗಳನ್ನೂ ಪ್ರಧಾನವಾಗಿ ಪರಿಗಣಿಸಲಾಗುತ್ತಿದೆಯಾದ್ದರಿಂದ ಆರ್ಥಿಕ ಭೂಗೋಳ ಶಾಸ್ತ್ರವನ್ನು ಪ್ರತ್ಯೇಕ ಕ್ಷೇತ್ರವಾಗಿ ಪರಿಗಣಿಸುವ ಪರಿಪಾಟ ಕಡಿಮೆಯಾಗುತ್ತಿದೆ. ಒಂದು ಪ್ರದೇಶದ ಸಂಪನ್ಮೂಲಗಳ ಅಧ್ಯಯನ, ಗಣಿಗಾರಿಕೆ ಹಾಗೂ ಖನಿಜಗಳು, ಕೃಷಿ ಮತ್ತು ಭೂಬಳಕೆಯ ಭೂಗೋಳಶಾಸ್ತ್ರ, ಕೈಗಾರಿಕಾ ಭೂವಿವರಣೆ (ಕೈಗಾರಿಕೆಗಳ ಸ್ಥಾನೀಕರಣ ಇತ್ಯಾದಿ) ಸಾರಿಗೆ ವ್ಯವಸ್ಥೆ, ಮಾರಟಗಾರಿಕೆ ಮುಂತಾದವುಗಳ ಭೌಗೋಳಿಕ ಅಧ್ಯಯನ ಇದರಲ್ಲಿ ಸೇರಿದೆ.

	6 ಭೌತಿಕ ಭೂಗೋಳಶಾಸ್ತ್ರ: ಇದು ಕೂಡ ಭೂಗೋಳಶಾಸ್ತ್ರದ ಒಂದು ವ್ಯಾಪಕ ವಿಭಾಗ. ಆರ್ಥಿಕ ಭೂಗೋಳದಂತೆ ಇದನ್ನೂ ಹಲವು ಉಪವಿಭಾಗಗಳಾಗಿ ವಿಂಗಡಿಸಬಹುದು. ವಾಯುಗುಣ ವಿಜ್ಞಾನ (ಇದಕ್ಕೂ ಹವಾಮಾನವಿಜ್ಞಾನಕ್ಕೂ ನಿಕಟ ಸಂಬಂಧ), ಭೂ ಆಕೃತಿ ರಚನಾವಿಜ್ಞಾನ (ಇದಕ್ಕೂ ಭೂವಿಜ್ಞಾನಕ್ಕೂ ನಿಕಟ ಸಂಬಂಧ), ಕೃಷಿವಾರ್ತಾಶಾಸ್ತ್ರ (ಅಗ್ರಾನೋಮಿ) ಹಾಗೂ ಅದಕ್ಕೆ ಸಂಬಂಧಿಸಿದ ಹಲವು ವಿಷಯಗಳೂ ಸೇರಿದಂತೆ ಮಣ್ಣುಗಳ ಭೌಗೋಳಿಕ ಅಧ್ಯಯನ, ನೆಲದ ಮೇಲಣ ನೀರಿನ ಭೌಗೋಳಿಕ ಅಧ್ಯಯನ, ಸಾಗರಗಳು ಭೌಗೋಳಿಕ ಅಧ್ಯಯನ-ಇವು ಭೌತಿಕ ಭೂಗೋಳಶಾಸ್ತ್ರದ ಕೆಲವು ಪ್ರಮುಖ ವಿಭಾಗಗಳು.

	7 ಜೀವಿ ಭೂಗೋಳಶಾಸ್ತ್ರ: ಇದು ಜೀವವಿಜ್ಞಾನದ ಒಂದು ಶಾಖೆಯೆನ್ನಬಹುದಾದರೂ ಭೂಗೋಳಶಾಸ್ತ್ರಜ್ಞರು ಈ ನಿಟ್ಟಿನಲ್ಲಿ ವಿಶೇಷ ಕೆಲಸ ಮಾಡಿದ್ದಾರೆ. ಸಸ್ಯವರ್ಗವನ್ನು ಕುರಿತಂತೆ ಅವರು ಮಾಡಿರುವ ಅಧ್ಯಯನ ಅಗಾಧ.

	8 ಸೈನಿಕ ಭೂಗೋಳಶಾಸ್ತ್ರ: ಎರಡನೆಯ ಮಹಾಯುದ್ಧದ ಕಾಲದಲ್ಲಿ ಇದು ವಿಶೇಷವಾಗಿ ಬೆಳೆವಣಿಗೆ ಹೊಂದಿತು. ಸೇವಾ ಸಂಬಂಧ ಸಮಸ್ಯೆಗಳಿಗೆ ಭೌಗೋಳಿಕ ಅಧ್ಯಯನದ ಅನ್ವಯವಿದು. ಸೇವಾ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರದೇಶ ಕುರಿತ ನಿಷ್ಕøಷ್ಟ ಭೌಗೊಳಿಕ ಜ್ಞಾನ ಅತ್ಯಾವಶ್ಯಕವೆಂಬ ಅರಿವೇ ಈ ವಿಭಾಗದ ಬೆಳೆವಣಿಗೆಗೆ ಮುಖ್ಯ ಕಾರಣ.

	ಭೂಗೋಳಶಾಸ್ತ್ರದ ಅಧ್ಯಯನಕ್ಕೆ ಸಂಬಂಧಿಸಿದಂತೆ ನಾನಾ ತಂತ್ರಗಳು ವಿಶೇಷವಾಗಿ ಬೆಳೆದಿವೆ. ಭೌಗೋಳಿಕ ಮಾಹಿತಿ ನಮಗೆ ಲಭ್ಯವಾಗುವುದು ನಾಲ್ಕು ಮೂಲಗಳಿಂದ: 1 ಭೂಪಟಗಳು, ಛಾಯಾ ಚಿತ್ರಗಳು ಮತ್ರು ಅಂಕೆ ಅಂಶಗಳೂ ಸೇರಿದಂತೆ ಎಲ್ಲ ದಾಖಲೆಗಳಿಂದ. 2 ವಿಮಾನ ಹಾಗೂ ಭೂ ಉಪಗ್ರಹಗಳಿಂದ ತೆಗೆದುಕೊಂಡ ಚಿತ್ರಗಳಿಂದ. 3 ಒಂದು ಕ್ಷೇತ್ರದ ಪ್ರತ್ಯಕ್ಷ ವೀಕ್ಷಣೆಯಿಂದ. 4 ಈ ಬಗ್ಗೆ ಮಾಹಿತಿ ನೀಡಬಲ್ಲವರ ಸಂದರ್ಶನದಿಂದ.

	ಸಂಗ್ರಹಿಸಲಾದ ಭೌಗೋಳಿಕ ದತ್ತಾಂಶದ ವಿಶ್ಲೇಷಣೆಯೂ ಮುಖ್ಯವೆ ವಿಶ್ಲೇಷಣೆ ನಾಲ್ಕು ಬಗೆ: ವಿವರಣಾತ್ಮಕ (ಪದಗಳನ್ನು ಬಳಸುವುದರ ಮೂಲಕ), ಸಂಖ್ಯಾಕಲನಾತ್ಮಕ (ಗಣಿತೀಯ ಸಂಕೇತಗಳನ್ನು ಬಳಸುವುದರ ಮೂಲಕ), ಭೂಪಟದ ಅಧ್ಯಯನದ ಮೂಲಕ, ಅಂತರಿಕ್ಷದಿಂದ ತೆಗೆದ ಚಿತ್ರಗಳ ವ್ಯಾಖ್ಯಾನದ ಮೂಲಕ. ಒಟ್ಟಿನಲ್ಲಿ ಭೂಗೋಳಶಾಸ್ತ್ರ ಭೂಗೋಳದ ಮೇಲೆ ವಾಸಿಸುವ ಮಾನವನಿಗೂ ಅವನನ್ನು ಬಳಸಿರುವ ನಿಸರ್ಗಕ್ಕೂ ನಡುವಣ ಪರಸ್ಪರ ಕ್ರಿಯೆ ಪ್ರತಿಕ್ರಿಯೆ ಮತ್ತು ಅಂತರ ಕ್ರಿಯೆಗಳಿಗೆ ಸಂಬಂಧಿಸಿದಂತೆ ನಡೆಸಲಾಗುವ ಅಧ್ಯಯನ. ಇದು ಹಲವು ಆಯಾಮಗಳನ್ನು ಒಳಗೊಂಡು ಬೆಳೆಯುತ್ತಲೇ ಇದೆ.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ